Wednesday, July 27, 2011

ರಂಗವಲ್ಲಿ

ಬದುಕು ಕಟ್ಟುವ ಭರದಿ 
ತುಳಿದು ಹಾಯದಿರಿಂದು 
ಅಂದು ಅಂದದಿ ಬರೆದ
ಕನಸು ರಂಗೋಲಿ.

ಭಾವಗಳ ಬಳಿ ಬಂದು 
ಬರಿದೆ ನಿಡುಸುಯ್ಯದಿರಿ
ಮುಚ್ಚಿದಂತಿದೆ ಮನದ ಕದಗಳೆಂದು.
ಎಲ್ಲಿಯೋ ಮೌನದಲಿ ಕನಸು ಹೊದ್ದಿರಬಹುದು
ಕೂಗಿ ಎಬ್ಬಿಸಿ ಒಮ್ಮೆ ಬಂದಿರುವೆನೆಂದು.

ಅಂದು ನವರಾತ್ರಿಯಲಿ
ಇಂದು ಶಿವರಾತ್ರಿಯಲಿ
ಮತ್ತೆಂದೋ ಶ್ರಾವಣದ ಸಂಜೆಗಳಲಿ 
ನೀ ಬರುವ ಹಾದಿಯಲಿ
ಮುಖ ಮಾಡಿ ಕುಳಿತಿಲ್ಲಿ
ಕತ್ತಲುಳಿಯಿತು ಕಣ್ಣ ರೆಪ್ಪೆಗಳಲಿ. 

ನಿನ್ನ ಬರುವಿಕೆ ಕಾದು
ಕಾದು ತಣಿಯಿತು ಧರೆಯು
ಆಷಾಡದಬ್ಬರದ ಮಳೆಯ ನೆನೆದು..

Monday, April 18, 2011

ನಿರಾಭರಣೆ

ಮಾವು ಬೇವಿನ ಜಡೆಗೆ 
ಸಿಹಿ ಹೂವ ಮುಡಿಸಿ ಬರೆ,
ಚೈತ್ರದೊಲುಮೆಯ ಮನದಿ 
                         Art--R. Tagore
ಸೌಗಂಧದಶ್ವತ್ತ ಪನ್ನೀರ ಹನಿಗಾವ್ಯ.

ಕೆಮ್ಮಣ್ಣು ಪದ ಧೂಳಿ 
ಕರಿನೀರು ಕೊರಳ ಹನಿ,
ತಂಪಿಡಿದ ಮಲಯವದು ಉಚ್ವಾಸ;
ಇಂಪಾಗಿ ಸೊಂಪಾಗಿ ಮರೆಗೆ ಬೆಳೆದಿಹೆ ಚಲುವೆ
ಕೊಚ್ಚ್ಚಿ ಹೋಗದಿರು ಕನಲಿ 
ಹುಯಿಲೆದ್ದ ಮಳೆಗೆ.

ಸ್ವಚ್ಛ ಪಟಿಕದ ಮಂಜು 
ಮುದ್ದಾದ ಇಬ್ಬನಿಗೆ 
ಪಚ್ಚೆ ಪದಕದ ಹಾರವೀ ಮುತ್ತು ಮಲ್ಲಿಗೆ ;
ಕೊಟ್ಟು ಎರವಲು ಕಂಪು 
ದುಂಡು ಮೊಲ್ಲೆಗೆ ಬಸಿದು
ಬೆತ್ತಲಾಯಿತು ಹಸಿರು ಚಪ್ಪರವು ಇರದೆ.

ಶಬ್ಧಗಳ ಪಯಣದಲಿ 
ನಿತ್ಯ ವಿಕಸನಗಳಲಿ 
ಭಾವ ಸುಮ ಮೈಮರೆವ 
ನಿರಾಭರಣೆ.