ಮುತ್ತು ಮಲ್ಲಿಗೆ
....ನಿತ್ಯ ವಿಕಸಿತ ಭಾವ ಕುಸುಮ
Sunday, March 15, 2015
Thursday, October 4, 2012
ಹನಿ ಮುತ್ತು
ಬರದಿ ಬಾಯ್ತೆರೆದ ಇಳೆಗೆ
ವರುಣನಾಶ್ರುವು ಬಿತ್ತು
ಬಸಿದು ಆಳಕೆ ಇಂಗಿ
ಒಡಲ ಬಸಿರಲಿ ಹೊತ್ತು
ಹಡೆದಳಾ ಭೂಮಿ.
ಮೊಳೆತ ಬೀಜದಿ ತುತ್ತು
ಆರೈಕೆ ಹಾರೈಕೆ ಫಲಗೂಡಿ
ತೊನೆಯುತಿದೆ ನಲಿಯುತಿದೆ
ಹೊನ್ನ ಪೈರು ತೆನೆ ಹೊತ್ತು.
ಅಣಿಯಾದ ರೈತನು ಇಂದು
ಕೊಯ್ದು ಉಣ್ಣಲು ಸ್ವಾತಿಮುತ್ತು ..
ಹೀಗೆಂದ..
ತುತ್ತು ನೀಡುವ ಪ್ರತಿ ತೆನೆಯೂ
ಸ್ವಾತಿ ಹನಿ ..
ಪ್ರತಿ ಕಾಳೂ ಮುತ್ತು .
ನಂಟು
ಮನೆಯಲ್ಲವಿದು ಸೋಗೆ, ಹಂಚಿನ ದೇಗುಲ.
ಆತ್ಮನಿಹನು ಎನ್ನ ಒಳ ಹೊರ ಸುಳಿಯುತ;
ಒಮ್ಮೆ ಗರ್ಭಗುಡಿಯೊಳಕೆ ಮತ್ತೊಮ್ಮೆ ಮರದ ಮಂಚದಲಿ,
ಹೊರ ಜಗುಲಿಯೋಳಿನ್ನೊಮ್ಮೆ .
ಕುಳಿತು ದಿಟ್ಟಿಸುವನು , ಕಣ್ಣಿನಲೇ ನಿರ್ದೇಶಿಸುವನು
ಮನಸು, ಮತಿಯ, ದೇಹ.
ಗೊಂದಲಗಳುತ್ತರಿಸುವನೆನಗೆ ತಂದೆಯಾಗಿ ,
ನೋವು ನಲಿವಾಲಿಸುವನು ಸೊಗಸು ಸಖನಾಗಿ,
ಕಂಬನಿಯನೋರೆಸುವನು ಅಕ್ಕರೆಯ ಅಮ್ಮನಾಗಿ
ಸ್ಪೂರ್ತಿಯೊರತೆಯಾಗುವನು ಎದೆಯೊಳಮೃತ ಜಲವಾಗಿ
ಬಿಸಿಯಪ್ಪುಗೆಯೋಳು ಮುತ್ತಿಕ್ಕುವನು ಹೃದಯದೊಳ ಸಖಿಯಾಗಿ.
ಎಲ್ಲವನೂ ಎಲ್ಲರನೂ ಸೃಷ್ಟಿಸಿಹನು ಮನದೊಡಲ ಮನೆಯೊಳಗೇ ;
ಸರ್ವಸ್ವವಾಗಿ ಎನಗೆ .
ಅಂತಿಹನ ಕೈಬಿಟ್ಟು ಕೈ ಬೀಸಿ ಹೇಳಲು ಎಂತು ಸಾದ್ಯವು ವಿಧಾಯವಾ
ಹೇಳು ಕಾಲವೇ ನೀ ಹೇಳು ..?
ಮಿಥ್ಯ ಪಥ
ಸುತ್ತ ಕತ್ತಲು ಹೆಂಚಿನರಮನೆ
ಬೆಚ್ಚಿ ಬೀಳುವ ಬೇಗುದಿ
ನುಚ್ಚಿನೊಳಗಿನ ತುತ್ತ ಸವಿಯಲು
ತೆಂಗು ಕಂಗಿನ ಸೋಗೆ ತಾಕುತ
ಮಬ್ಬು ಹರಿದಿದೆ ಕಣ್ಣಲಿ
ಕಪ್ಪು ಬಿಳುಪಿನ ಚಿತ್ರ ಕರಗಿದೆ
ವಿಸ್ಮೃತಿಯ ಭ್ರಮೆಯೊಳು ಮನದಲಿ
ಮಿತಿಯನರಿಯದ ಆಸೆಗೋಪುರ
ಮಿತ್ಯವಿಹುದೀ ಬದುಕಲಿ
ಭಾವ ರಂಗದ ಕಂಸಾಳೆ ಪದದೊಳು
ಕಲಿಕೆ ಮಾತ್ರವೇ ಷಡ್ಜಗಳ
ಛತ್ರ ಚಾಮರವಿಲ್ಲ ನನಸೋಳು
ಕಿಚ್ಚು ಕಲ್ಗಳೇ ಪಥಗಳು
ಮೆಟ್ಟಿ ನಿಲ್ಲುವ ಮೆಟ್ಟು ಸಾಧನ;
ಛಲದ ಕಾಲ್ಗಳೇ ವಾಹನ
ಬಿಚ್ಚಿ ನಡೆ ನಿನ್ನಂಘ್ರಿ ಪಥದೊಳು
ಓಘವಾಗಲಿ ಜೀವನ,
ಯಾರು ತಾನೆ ಏಕೆ ಪೊರೆವರು
ನಿನಗೆ ನೀನೇ ವಿಕ್ರಮ
Subscribe to:
Posts (Atom)



