Thursday, September 13, 2012

ನೆನಪು

ಪುಸ್ತಕದ ಹಾಳೆಗಳ ಅಂದು ತಿರುವುತಲಿದ್ದೆ
ಅಲ್ಲೊಮ್ಮೆ ಮಿಸುಕಿತು ನವಿಲುಗರಿಯೊಂದು
ಜುಮ್ಮನೆಯ ಝೇಂಕಾರ ಎದೆಯಾಳ ಹೊಕ್ಕಿತು
ಕಣ್ಮುಚ್ಚಿ ನೇವರಿಸಿದೆ ; ಆಗ ನಿನ್ನ ಕಂಡೆ
ಚೆಲುವೆ , ಆ ನವಿಲ ಕಂಡೆ
ಅದರ ಗರಿಯೊಳು ನಿನ್ನ ಕಣ್ಣು ಕಂಡೆ.
ಅದೆಷ್ಟು ಸುಂದರ ನಯನ; ಮನೋಹರ.

ಅಭಾವ

ಮುಗಿಲ ತುಂಬೆಲ್ಲಾ ದೈತ್ಯ ಮೇಘಗಳ ಸಂದಣಿ 
ಭಾವ ರಹಿತ ಮನವಿಲ್ಲಿ ಹಿಮ್ಮೆಳದರಗಿಣಿ 
ನರ್ತನಕೆ ಸಜ್ಜಾಗುತಿದೆಯಾ ನವಿಲು 
ನೋಡಲು ರಸಿಕರು ಮಾತ್ರ ನೆರೆದಿಲ್ಲ. 

ತವಕ


ಮನ ಮಾಲೆಯೋಳರಳಿದಾ ಕುಸುಮದ ಕಂಪು
ಅಲ್ಪರ ಅತ್ತರದ ಘಮ್ಮೆಂದು ರಾಚಿ ರಾಡಿಯೆಬ್ಬಿಸಿ 
ಮೂಗು ಮುಚ್ಚಿಸುವ ವಾಸನಾ ಶೂಲದಂತಲ್ಲ ;
ಇದು ಭಾವನೆ , ಕಲ್ಪನೆ, ಕನಸು 
ಒಂದಿಷ್ಟು ವಾಸ್ತವಗಳ ಗೊಂಚಲು ಗೊಂಚಲು
ಮಲ್ಲಿಗೆ , ಜಾಜಿ, ಇರುಳ ರಾಣಿಯರ ಹೂಗೆನ್ನೆ ತೀಡಿ 
ಜುಮ್ಮೆಂದು ಬೀಸುವ ಮಂದಾನಿಲದೊಳ ಹೊಕ್ಕ ಪ್ರಕೃತಿಯುಸಿರು 
ನವ ನವೀನ ಚಿಂತನೆಗಳುಚ್ವಾಸ ನಿಶ್ವಾಸಗಳೇರಿಳಿತ .

ಯಾವುದೀ ಕಿವಿ ತುಂಬಿದಾ ನಿನಾದ?
ಯಾರ ಜೀವದ ಬಿದಿರು ಮೆಳೆಯಲಿತ್ತೋ ?
ನಿನ್ನೆ ನಾಳೆಗಳ ತಪ್ಪು ಒಪ್ಪು ಸತ್ಯಾಸತ್ಯಗಳ ಲೆಕ್ಕದಲಿ 
ಕೂಡಿ ಕಳೆಯಲು ಆಡಿಸುವಾ ಬೆರಳುಗಳಲಿತ್ತೋ ?
ಚಿತ್ರ ಕೃಪೆ : ನಾಗೇಂದ್ರ ಮಯ್ಯ 
ಇಲ್ಲಾ, ಆಸೆ-ನಿರಾಸೆ ಏಳು - ಬೀಳುಗಳ ರಂಧ್ರಗಳಲಿತ್ತೋ ?
ಅದಿಲ್ಲವೇ ಕಷ್ಟ - ಸುಖಗಳ ಹೊಡೆತಕ್ಕೆ ನಲುಗಿ
ಹೊರ ಹೊಮ್ಮಿದ ನವಿರು ನಿಟ್ಟುಸಿರಿನಲ್ಲಿದ್ದಿದ್ದಿರಬೇಕು ;
ಈ ಮಧುರ ಮುರಳಿಗಾನ , ಬದುಕ ಕೊಳಲ ಮೌನ
ಹರಿಯಿತೀ ಜೀವನದ ಇನಿದು ಸ್ವರವಾಗಿ.
ಎತ್ತಲಿತ್ತೀ  ದನಿಯು ?
ಅರಸಿದರೆ ಅರಸುತ್ತಲೇ ಇರಬೇಕು; ಜಾಡು ಸಿಗದು.

 ವಿಶ್ವದಸ್ತಿತ್ವದೆಲ್ಲರಸಸ್ವಾದಗಳನುಭವವೇ ಬದುಕು.
ಕತ್ತಲರಿ ನೇಸರನು ನೆತ್ತಿಯನೂ ಸುಡುವನದಕತ್ತಿ ಫಲಗಳ
ಹಚ್ಚಿ ತಂಪನೆರೆವನಾ ಶಶಿಗೆ
ಮತ್ತೆಲ್ಲಿತ್ತಲಾ ಬೆಳಕು, ಕೇಳಿ?
ತಿಳಿದುತ್ತರವಾ ಬರೆಯಲೆತ್ನಿಸಿದಾ ಕಡಲಿಗಿಂದುವಿನಾ ಸೆಳೆತ .
ಕಣ್ಮುಚ್ಚಿ ತೆರೆಯಲಾ ರವಿ ಸ್ಪರ್ಶದಾ ಪುಳಕ.
ಇದನರಿತ ದಡವಿಲ್ಲಿ ಪಿಸುಗುಟ್ಟಿ ಕೂಗುತಿದೆ(!) ಸಾಗರಕೆ ,
'ನಿನ್ನ ಮನದೆರೆದು ಬರೆ ಇಲ್ಲಿ ಸವಿಜೀವಕಾವ್ಯ.
ಮುಖವಿಕ್ಕಿ ಹರಿಯ ಬಿಡು ಮನದಾಳದಾಶ್ರು ಹನಿ;
ನನ್ನೆದೆಯ ಮರಳಿನಲಿ ಇಂಗಿ ಒಡಲಿಗಿಳಿಯಲಿ '.
ಎಂದ ಸಂತಸಕ್ಕುಕ್ಕುಕ್ಕಿ ಬರೆ ಬರೆದು ನೊರೆಗಳಲಿ
ದಣಿದು ಭೋರ್ಗರೆದು ಹತಾಶೆಯಿಂದಳಿಸಿ ಹಾಕಿತು ತೆರೆಗಳಾಗಿ.

ಅಂತಿದುವೆ ಬದುಕು ನಮ್ಮ ನುಂಗಿ ಜೀರ್ಣಿಸುವ ಹುನ್ನಾರದಲಿ
ಹೊಂಚು ಹಾಕಿ , ಸಂಚಿನ ಬಲೆ ಬೀಸುವುದು; ಒಮ್ಮೊಮ್ಮೆ
ಜೀವ ಮಿಕ ಸೋತು ಬೀಳುವುದು; ಕೆಲವೊಮ್ಮೆ ಧೃತಿಗೆಟ್ಟು
ದಿಕ್ತಪ್ಪಿಯೋಡಿ ಸುಸ್ತಾಗಿ ಕುಸಿಯುವುದು ಬದುಕು;
ಎದೆಯೊಡ್ಡಿ ಸಡ್ದೋಡೆದ ಛಲದ ಕೈಗಳನೇ ಸೇರುವುದು
ಹೆದರಿ , ಸೋತು ಶರಣಾಗಿ ಕೊನೆಗೆ.