ಚೆಲ್ಲಿದೆ ವಿಷಾದ ದುಗುಡ
ಕಾಣದೇಕೋ ಸುಮನಸುನಗು ವದನ,
ಇಂದು ಕಿರಣ ತಂಪಿನಲ್ಲೂ
ಮೌನಗಾನದುಬ್ಬರದಬ್ಬರವದೇಕೋ
ನೀರವ ಮನದಾಬ್ಧಿಯೋಳು.
ಮತ್ತೆಂದು ಕಾಣಲಿ ಆ ಶಾಂತ ಮುಖಸಾಗರ
ಕಣ್ಣಲ್ಲಿ ತೇವ ; ಮನ ಕೇಳಿತು 'ನೋವಾ' ?
ಹುಸಿಯ ನುಡಿಯಲೆಂತು ತಿಳಿದಾ ವಿಷಯ
ನಲಿವಿನಾ ಹೊನಲಿನೊಳು ಕೊಚ್ಚಿ ಹೋಗದಿರಲೆಂದು
ಸೃಷ್ಟಿಕರ್ತನಾ ಒಡ್ಡಿದು 'ದುಃಖರಾಜ ಸಾಗರ'.
ಈ ಬಾಷ್ಪದೊಡಲಲ್ಲಿ ತೋಯ್ದು ಈಜು ಹೊಡೆಯಲೆಂಬಂತೆ
ಆದೇಶಿಸಿರುವನೆ ಮತಪ್ರಭು ?
ಆಸೆಯಾ ತೂಬುಗಳು, ಕಿತ್ತ ನಿರಾಸೆಯಾ ಕದಗಳು
ಹುಳಿ ಹೆಂಡದಾ ಮಾರುದ್ದ ಮೊಳೆಗಳು,
ಗರಿ ಗರಿ ನೋಟಿನಾ ಗಟ್ಟಿ ಸುತ್ತಿಗೆಗೆ,
ಅಜ್ನ್ಯಾನದಾ ಕಾವು;
ಹಿಡಿದೆತ್ತಿ ಬಡಿದವಾ 'ಕೈ'ಗಳು?
ಒತ್ತಿ ಕದಗಳ; ಕನಸುಗಾರ ರಾಷ್ಟ್ರಪುರುಷನಾ
ಮನದ ಜೀವಂತ ಪೆಟ್ಟಿಗೆಗೆ;
ಪಟ್ಟಿಗಂಜುವನೆ ಆತ ?
ದೇಶ ಕಟ್ಟಿದವ, ಪರದೇಶಿ; ಆಗಿ
ಆಳುವವ ನಮ್ಮ ನೆಲವ.
ಆದರೆಂತು ಸಾಧ್ಯ ಮನವನು?!
ನೆಲವಲ್ಲ ಇದು ಜಲವಲ್ಲ
ಭಾವನೆಗಳ ಗುಡಿ ಕಲ್ಯಾಣಿ.
ಸಾರಿಸಬೇಡವೆ ಹಾಕಿ ಗೋಮಯ ರಂಗೋಲಿ;
ಇಡಬೇಡವೇ ಅಡವಾಗಿ ಜಗದ ಖಜಾನೆಯೊಳು ?!
ಮುಪ್ಪಿನಲೂ ತಣಿಯದಾ ಜೀವನೋತ್ಸಾಹ

ಬಿಸಿನೀರ ಬುಗ್ಗೆ;
ತಣ್ಣಗೆ ಗಡ್ಡೆಗಟ್ಟಿದೆ ಕವಿ ಮನ.
ಮತ್ತದೇ ಹಾಡು ಗುನುಗಿದೆ.......
"...ಮಾಡಬೇಕು; ಮಾಡುವುದಾದರೂ ಯಾರಿಗೆ..?
ನಮಿಸುವ ತಾಯಿಗೆ; ಇರುವಾಗ ಮಲಮಕ್ಕಳು ..."
****************