Friday, February 17, 2012

ಬಿನ್ನಗೆ

ದೈತ್ಯ ಕರಿಮೋಡಗಳ ಹಿಮ್ಮೇಳದುಸಿರಿನಲಿ
ದಿನ ದಿನವೂ ಗರಿ ಬಿಚ್ಚಿ ಕುಣಿವ ಮಯೂರಿ. 
ಮನದ ಭಾವದಭಾವವೊಡಿಸುವ ಸುಂದರಿ. 
ಕಂಗಳಾಯಾಸಕ್ಕೆ ಪನ್ನೀರು ಚಿಮುಕಿಸುವ ಕಿನ್ನರಿ; 
ಇಂದೇಕೆ ಮರೆಯಾದೆ ಈ ಹುಲ್ಲು ಹಸಿರಿನಲಿ..?
ಬಿಕೋ ಎನ್ನುತಿದೆ ಮನ ತುಂಬಿ ನಿನ್ನ ಭಾವ ಲಹರಿ. 

ಯೋಚನೆಯ ಬಾನಲಿ ಸೂರ್ಯ ಮಿರುಗಿ ಮಿಂಚುತಲಿಲ್ಲ
ಭಾವನೆಯ ಬದುಕಿನ ತುಂಬಾ ಕಾರ್ಮೊಡವೆ ಎಲ್ಲಾ
ಕಂಗಳಲಿ ಕಾಂತಿಯಿಲ್ಲ, ಜೀವ ಜೋಕಾಲಿ ಜೀಕುತಿಲ್ಲ 
ನೀನಿಲ್ಲದಾ ಎದೆಯ ಬಯಲಿಂದು ಬಿನ್ನಗೆ;
ಎಲ್ಲಿಯೂ ಝಾಲ್ಲೆನಿಸುವ ಝಾಣ ಝಾಣ ಝೇಂಕಾರವಿಲ್ಲ 
ಇನ್ನಾದರೂ ಬರುವೆಯಾ ಹೃದಯದಂಗಳಕೆ ಠಪೋರಿ..!?

ನಾಳಿನರುಣನು ಬರುವ ನವಿರು ಹಾದಿಯ ತುಳಿದು 
ಹಸಿರು ಹಾಸಲಿ ಇಳಿದು ನಗುವ ತೋರಣ ಹೆಣೆದು 
ಮನ ಬಿಚ್ಚಿ ನರ್ತಿಸುವೆಯಾ ನಾಟ್ಯ ಮನೋಹರಿ..?

ದೋಣಿ ದಾಟಿದ ಮೇಲೆ ....

ಚೆಲ್ಲಿದೆ ವಿಷಾದ ದುಗುಡ
ಕಾಣದೇಕೋ ಸುಮನಸುನಗು ವದನ,
ಇಂದು ಕಿರಣ ತಂಪಿನಲ್ಲೂ 
ಮೌನಗಾನದುಬ್ಬರದಬ್ಬರವದೇಕೋ 
ನೀರವ ಮನದಾಬ್ಧಿಯೋಳು.

ಮತ್ತೆಂದು ಕಾಣಲಿ ಆ ಶಾಂತ ಮುಖಸಾಗರ 
ಕಣ್ಣಲ್ಲಿ ತೇವ ; ಮನ ಕೇಳಿತು 'ನೋವಾ' ?
ಹುಸಿಯ ನುಡಿಯಲೆಂತು ತಿಳಿದಾ ವಿಷಯ 
ನಲಿವಿನಾ ಹೊನಲಿನೊಳು ಕೊಚ್ಚಿ ಹೋಗದಿರಲೆಂದು 
ಸೃಷ್ಟಿಕರ್ತನಾ ಒಡ್ಡಿದು 'ದುಃಖರಾಜ ಸಾಗರ'.

ಈ ಬಾಷ್ಪದೊಡಲಲ್ಲಿ ತೋಯ್ದು ಈಜು ಹೊಡೆಯಲೆಂಬಂತೆ 
ಆದೇಶಿಸಿರುವನೆ ಮತಪ್ರಭು ?
ಆಸೆಯಾ ತೂಬುಗಳು, ಕಿತ್ತ ನಿರಾಸೆಯಾ ಕದಗಳು 
ಹುಳಿ ಹೆಂಡದಾ ಮಾರುದ್ದ ಮೊಳೆಗಳು,
ಗರಿ ಗರಿ ನೋಟಿನಾ ಗಟ್ಟಿ ಸುತ್ತಿಗೆಗೆ,
ಅಜ್ನ್ಯಾನದಾ ಕಾವು;
ಹಿಡಿದೆತ್ತಿ ಬಡಿದವಾ 'ಕೈ'ಗಳು?
ಒತ್ತಿ ಕದಗಳ; ಕನಸುಗಾರ ರಾಷ್ಟ್ರಪುರುಷನಾ
ಮನದ ಜೀವಂತ ಪೆಟ್ಟಿಗೆಗೆ;
ಪಟ್ಟಿಗಂಜುವನೆ ಆತ ?

ದೇಶ ಕಟ್ಟಿದವ, ಪರದೇಶಿ; ಆಗಿ
ಆಳುವವ ನಮ್ಮ ನೆಲವ.
ಆದರೆಂತು ಸಾಧ್ಯ ಮನವನು?!
ನೆಲವಲ್ಲ ಇದು ಜಲವಲ್ಲ
ಭಾವನೆಗಳ ಗುಡಿ ಕಲ್ಯಾಣಿ.
ಸಾರಿಸಬೇಡವೆ ಹಾಕಿ ಗೋಮಯ ರಂಗೋಲಿ;
ಇಡಬೇಡವೇ ಅಡವಾಗಿ ಜಗದ ಖಜಾನೆಯೊಳು ?!

ಮುಪ್ಪಿನಲೂ ತಣಿಯದಾ ಜೀವನೋತ್ಸಾಹ 
ಬಿಸಿನೀರ ಬುಗ್ಗೆ;
ತಣ್ಣಗೆ ಗಡ್ಡೆಗಟ್ಟಿದೆ  ಕವಿ ಮನ.
ಮತ್ತದೇ ಹಾಡು ಗುನುಗಿದೆ....... 
"...ಮಾಡಬೇಕು; ಮಾಡುವುದಾದರೂ ಯಾರಿಗೆ..?
ನಮಿಸುವ ತಾಯಿಗೆ; ಇರುವಾಗ ಮಲಮಕ್ಕಳು ..."

             
             ****************



ಬದುಕು - ಬವಣೆ

ಬೆವರು ನೆತ್ತರು ಹೀರಿ ಬೀಜ ಮೊಳೆಯುತಿದೆ
ಫಲವುಣದ ಬಡವನ ಚಿತ್ರ ಮೊಳೆಗೆ ತೂಗಾಡುತಿದೆ
ಬಯಕೆ ಹಂಬಲದ ಬದುಕು ಬೀದಿ ಪಾಲಾಗಿದೆ
ಪತಿಯ ಚಿತೆ ಬೂದಿಯಲಿ ಜೀವ ಮುಸುರೆ ತಿಕ್ಕುತಿದೆ 
ಕಣ್ಣೀರ ನಳವದುವೆ ಮುಗಿದು ತೊಟ್ಟಿಕ್ಕುತಿದೆ
ಕೈ ಮಸಿಯು ತೊಟ್ಟಿಲಿನ ಹಸುಗೂಸಗೆನ್ನೆಗಂಟುತಲಿದೆ 
ಅತ್ತ ಧನಿಕನ ಮೋಜು ಎಡೆ ಬಿಡದೆ ನಡೆಯುತಿದೆ ;
ಇದೇ ಬಡವನ ಬದುಕು - ಬವಣೆಯ ಭಾರತ.

Thursday, February 16, 2012

ಮುಗಿಲ ಹೆಗಲೇರಿ..

ಪವನನಿಗೇನು ಅವಸರ
ಓಡುತಿರುವವನಲ್ಲ ಸರ ಸರ
ಹೊತ್ತು ಶಿರದಿ ಮುಗಿಲ ಭಾರ
ಸೇರುವವನೆ ನಲ್ಲೆಯನು ನೇರ..? ?

ಒಲೆಗಳೆಷ್ಟೋ ಮೆಘದಂಚೆಯೋಳು
ಇನಿಯನನು ಕೂಗುತಿವೆ ಅರ್ಧವದರೊಳು
ಮಿಕ್ಕೆಲ್ಲ ಮಿಸುಕುತಿವೆ ಕಾಣದೆ ಪ್ರಿಯೆಯ ನೆರಳು ಎಲ್ಲರಾಶಯವೂ ಸುಖಾಂತ್ಯಗೊಳುವುದಿ ಪತ್ರ    ವ್ಯವಹಾರಗಳು.


ಸುರಿಯಲೀ  ಓಲೆಗಳ ಮಳೆಯನೀ ಮೋಡಗಳು
ಪ್ರೆಮಿಗಳೆದೆಯ ಹಳ್ಳ ಕೊಳ್ಳಗಳಲಿ.
ತುಂಬಿ ಹರಿದು ಸೇರಲಿ ಪ್ರೆಮವಾಹಿನಿಯಲಿ ಕೂಡಿ;
ಬಾಳಲಿ ಚಿರಕಾಲ ಸುಖ ಸಮೃದ್ಧಿಯಲೀಜಾಡಿ;
ಹಂಬಲದೊಳು ಓಡುತಿದೆ ಮುಗಿಲ ಹೆಗಲೇರಿ.