Thursday, September 13, 2012

ತವಕ


ಮನ ಮಾಲೆಯೋಳರಳಿದಾ ಕುಸುಮದ ಕಂಪು
ಅಲ್ಪರ ಅತ್ತರದ ಘಮ್ಮೆಂದು ರಾಚಿ ರಾಡಿಯೆಬ್ಬಿಸಿ 
ಮೂಗು ಮುಚ್ಚಿಸುವ ವಾಸನಾ ಶೂಲದಂತಲ್ಲ ;
ಇದು ಭಾವನೆ , ಕಲ್ಪನೆ, ಕನಸು 
ಒಂದಿಷ್ಟು ವಾಸ್ತವಗಳ ಗೊಂಚಲು ಗೊಂಚಲು
ಮಲ್ಲಿಗೆ , ಜಾಜಿ, ಇರುಳ ರಾಣಿಯರ ಹೂಗೆನ್ನೆ ತೀಡಿ 
ಜುಮ್ಮೆಂದು ಬೀಸುವ ಮಂದಾನಿಲದೊಳ ಹೊಕ್ಕ ಪ್ರಕೃತಿಯುಸಿರು 
ನವ ನವೀನ ಚಿಂತನೆಗಳುಚ್ವಾಸ ನಿಶ್ವಾಸಗಳೇರಿಳಿತ .

ಯಾವುದೀ ಕಿವಿ ತುಂಬಿದಾ ನಿನಾದ?
ಯಾರ ಜೀವದ ಬಿದಿರು ಮೆಳೆಯಲಿತ್ತೋ ?
ನಿನ್ನೆ ನಾಳೆಗಳ ತಪ್ಪು ಒಪ್ಪು ಸತ್ಯಾಸತ್ಯಗಳ ಲೆಕ್ಕದಲಿ 
ಕೂಡಿ ಕಳೆಯಲು ಆಡಿಸುವಾ ಬೆರಳುಗಳಲಿತ್ತೋ ?
ಚಿತ್ರ ಕೃಪೆ : ನಾಗೇಂದ್ರ ಮಯ್ಯ 
ಇಲ್ಲಾ, ಆಸೆ-ನಿರಾಸೆ ಏಳು - ಬೀಳುಗಳ ರಂಧ್ರಗಳಲಿತ್ತೋ ?
ಅದಿಲ್ಲವೇ ಕಷ್ಟ - ಸುಖಗಳ ಹೊಡೆತಕ್ಕೆ ನಲುಗಿ
ಹೊರ ಹೊಮ್ಮಿದ ನವಿರು ನಿಟ್ಟುಸಿರಿನಲ್ಲಿದ್ದಿದ್ದಿರಬೇಕು ;
ಈ ಮಧುರ ಮುರಳಿಗಾನ , ಬದುಕ ಕೊಳಲ ಮೌನ
ಹರಿಯಿತೀ ಜೀವನದ ಇನಿದು ಸ್ವರವಾಗಿ.
ಎತ್ತಲಿತ್ತೀ  ದನಿಯು ?
ಅರಸಿದರೆ ಅರಸುತ್ತಲೇ ಇರಬೇಕು; ಜಾಡು ಸಿಗದು.

 ವಿಶ್ವದಸ್ತಿತ್ವದೆಲ್ಲರಸಸ್ವಾದಗಳನುಭವವೇ ಬದುಕು.
ಕತ್ತಲರಿ ನೇಸರನು ನೆತ್ತಿಯನೂ ಸುಡುವನದಕತ್ತಿ ಫಲಗಳ
ಹಚ್ಚಿ ತಂಪನೆರೆವನಾ ಶಶಿಗೆ
ಮತ್ತೆಲ್ಲಿತ್ತಲಾ ಬೆಳಕು, ಕೇಳಿ?
ತಿಳಿದುತ್ತರವಾ ಬರೆಯಲೆತ್ನಿಸಿದಾ ಕಡಲಿಗಿಂದುವಿನಾ ಸೆಳೆತ .
ಕಣ್ಮುಚ್ಚಿ ತೆರೆಯಲಾ ರವಿ ಸ್ಪರ್ಶದಾ ಪುಳಕ.
ಇದನರಿತ ದಡವಿಲ್ಲಿ ಪಿಸುಗುಟ್ಟಿ ಕೂಗುತಿದೆ(!) ಸಾಗರಕೆ ,
'ನಿನ್ನ ಮನದೆರೆದು ಬರೆ ಇಲ್ಲಿ ಸವಿಜೀವಕಾವ್ಯ.
ಮುಖವಿಕ್ಕಿ ಹರಿಯ ಬಿಡು ಮನದಾಳದಾಶ್ರು ಹನಿ;
ನನ್ನೆದೆಯ ಮರಳಿನಲಿ ಇಂಗಿ ಒಡಲಿಗಿಳಿಯಲಿ '.
ಎಂದ ಸಂತಸಕ್ಕುಕ್ಕುಕ್ಕಿ ಬರೆ ಬರೆದು ನೊರೆಗಳಲಿ
ದಣಿದು ಭೋರ್ಗರೆದು ಹತಾಶೆಯಿಂದಳಿಸಿ ಹಾಕಿತು ತೆರೆಗಳಾಗಿ.

ಅಂತಿದುವೆ ಬದುಕು ನಮ್ಮ ನುಂಗಿ ಜೀರ್ಣಿಸುವ ಹುನ್ನಾರದಲಿ
ಹೊಂಚು ಹಾಕಿ , ಸಂಚಿನ ಬಲೆ ಬೀಸುವುದು; ಒಮ್ಮೊಮ್ಮೆ
ಜೀವ ಮಿಕ ಸೋತು ಬೀಳುವುದು; ಕೆಲವೊಮ್ಮೆ ಧೃತಿಗೆಟ್ಟು
ದಿಕ್ತಪ್ಪಿಯೋಡಿ ಸುಸ್ತಾಗಿ ಕುಸಿಯುವುದು ಬದುಕು;
ಎದೆಯೊಡ್ಡಿ ಸಡ್ದೋಡೆದ ಛಲದ ಕೈಗಳನೇ ಸೇರುವುದು
ಹೆದರಿ , ಸೋತು ಶರಣಾಗಿ ಕೊನೆಗೆ.








No comments:

Post a Comment