Thursday, October 4, 2012

ನಂಟು

ಮನೆಯಲ್ಲವಿದು ಸೋಗೆ, ಹಂಚಿನ ದೇಗುಲ.
ಆತ್ಮನಿಹನು ಎನ್ನ ಒಳ ಹೊರ ಸುಳಿಯುತ;
ಒಮ್ಮೆ ಗರ್ಭಗುಡಿಯೊಳಕೆ ಮತ್ತೊಮ್ಮೆ ಮರದ ಮಂಚದಲಿ,
ಹೊರ ಜಗುಲಿಯೋಳಿನ್ನೊಮ್ಮೆ .
ಕುಳಿತು ದಿಟ್ಟಿಸುವನು , ಕಣ್ಣಿನಲೇ ನಿರ್ದೇಶಿಸುವನು 
ಮನಸು, ಮತಿಯ, ದೇಹ.

ಗೊಂದಲಗಳುತ್ತರಿಸುವನೆನಗೆ ತಂದೆಯಾಗಿ ,
ನೋವು ನಲಿವಾಲಿಸುವನು ಸೊಗಸು ಸಖನಾಗಿ, 
ಕಂಬನಿಯನೋರೆಸುವನು ಅಕ್ಕರೆಯ ಅಮ್ಮನಾಗಿ 
ಸ್ಪೂರ್ತಿಯೊರತೆಯಾಗುವನು ಎದೆಯೊಳಮೃತ ಜಲವಾಗಿ 
ಬಿಸಿಯಪ್ಪುಗೆಯೋಳು ಮುತ್ತಿಕ್ಕುವನು ಹೃದಯದೊಳ ಸಖಿಯಾಗಿ.

ಎಲ್ಲವನೂ ಎಲ್ಲರನೂ  ಸೃಷ್ಟಿಸಿಹನು ಮನದೊಡಲ ಮನೆಯೊಳಗೇ ;
ಸರ್ವಸ್ವವಾಗಿ ಎನಗೆ .
ಅಂತಿಹನ ಕೈಬಿಟ್ಟು ಕೈ ಬೀಸಿ ಹೇಳಲು ಎಂತು ಸಾದ್ಯವು ವಿಧಾಯವಾ 
ಹೇಳು ಕಾಲವೇ ನೀ ಹೇಳು ..? 

No comments:

Post a Comment